ಅಪೆನೈನ್‍ಶ್ರೇಣಿ
	ಆಲ್ಪ್ಸ್ ಪರ್ವತಾವಳಿಯಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಭಾಗ. ಇದನ್ನು ಇಟಲಿದೇಶದ ಬೆನ್ನೆಲುಬು ಎನ್ನುವರು. ಆಲ್ಪ್ಸ್ ಪರ್ವತದಲ್ಲಿ ಸಮುದ್ರಕ್ಕೆ ಸಮೀಪವಾಗಿರುವ ಭಾಗದಿಂದ ಪ್ರಾರಂಭವಾಗಿ ಇಟಲಿ, ಸಿಸಿಲಿ ದೇಶಗಳ ಮಧ್ಯದಲ್ಲಿ ಹರಡಿದೆ. ಒಂದೇ ಪರ್ವತಾವಳಿಯಾಗಿದ್ದರೂ ಇದರಲ್ಲಿ ಉತ್ತರಭಾಗ, ಮಧ್ಯಭಾಗ ಮತ್ತು ದಕ್ಷಿಣಭಾಗವೆಂಬ ಭೌಗೋಲಿಕ ವಿಭಾಗಗಳನ್ನು ಕಾಣಬಹುದು. 1 ಉತ್ತರದ ಭಾಗದಲ್ಲಿ ಲೆಗೂರಿಯನ್, ಟಸ್ಕನ್, ಅಂಬ್ರಿಯನ್ ಎಂಬ ಮೂರು ಪರ್ವತಗಳಿವೆ. ಲೆಗೂರಿಯನ್ ಪರ್ವತ ಜಿನೀವಾ ಖಾರಿಯನ್ನು ಸುತ್ತುವರಿದಿದೆ. ಮೌಂಟ್ ಬ್ಯೂ ಎಂಬುದೇ ಎತ್ತರದ ಶಿಖರ (5915). ಟಸ್ಕನ್ ಬೆಟ್ಟಗಳಲ್ಲಿ ಅತ್ಯುನ್ನತ ಶಿಖರ ಮೌಂಟ್ ಸೀಮೋನ್ (7103'). ಇದರ ಹತ್ತಿರ ಸಂಗಮವರಿ ಕಲ್ಲುಗಳು ದೊರಕುತ್ತವೆ. ಇಲ್ಲಿ ಅರ್ನೋಪನಾರೊ, ಸೆತಾವೊ ಮತ್ತು ರೇನೋ ನದಿಗಳ ಉಗಮಸ್ಥಾನಗಳಿವೆ. ಅಂಬ್ರಿಯನ್ ಬೆಟ್ಟಗಳಿಂದ ಟೈಬರ್ ಮತ್ತು ಮೆಟಾನಸ್ ನದಿಗಳು ಹರಿದು ಬರುತ್ತವೆ. 2 ಮಧ್ಯಭಾಗ ಅತಿ ಎತ್ತರವಾದ ಶಿಖರಗಳಿಂದ ತುಂಬಿದೆ. ಅವುಗಳಲ್ಲಿ ಅತಿ ಎತ್ತರವಾದುದು ಮೌಂಟ್ ಕಾರ್ನೋ (9560'). 3 ದಕ್ಷಿಣ ಪರ್ವತಾವಳಿಗಳು ನಿಯಮಿತವಾಗಿ ಹಬ್ಬಿಲ್ಲ. ಮೌಂಟ್ ಪಾಲಿನೊ (7375') ಎತ್ತರದ ಶಿಖರ. ಇಲ್ಲಿ ಮೌಂಟ್ ಎಟ್ನ ಮತ್ತು ಸ್ಟ್ರಾಂಬೋಲಿ ಎಂಬ ಜಾಗೃತಜ್ವಾಲಾಮುಖಿಗಳಿವೆ.									
(ಡಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ